ವಿಷಯಕ್ಕೆ ಹೋಗು

ಕಡಲ ಸಿಂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಡಲ ಸಿಂಹ

ಕಡಲ ಸಿಂಹ

[ಬದಲಾಯಿಸಿ]

ಪಿನ್ನಿಪೀಡಿಯ ಗಣದ ಓಟರೈಯಿಡೀ ಕುಟುಂಬದ ಹಲವಾರು ಜಾತಿಯ ಪ್ರಾಣಿಗಳಿರುವ ಸಾಮಾನ್ಯ ಹೆಸರು (ಸೀ ಲಯನ್). ಇವೆಲ್ಲವುಗಳಲ್ಲೂ ಕಂಡುಬರುವ ನೀಳ ಹಾಗೂ ಸುಸ್ಪಷ್ಟವಾದ ಕತ್ತು, ಚಿಕ್ಕವಾದರೂ ಎದ್ದುಕಾಣುವ ಕಿವಿಗಳು, ಮೂತಿಯ ತುದಿಯಲ್ಲಿರುವ ಮೂಗಿನ [[ಹೊಳ್ಳೆಗಳು, ಎರಡು ಜೊತೆ ಕಾಲುಗಳಲ್ಲಿರುವ ಜಾಲಪಾದ, ಈಜುವಾಗ ಹಿಂದಕ್ಕೆ ಚಾಚುವ ಹಿಂಗಾಲುಗಳನ್ನು ನೆಲದ ಮೇಲೆ ಬಂದಾಗ ಮುಂದಕ್ಕೆ ತಿರುಗಿಸಿಕೊಳ್ಳುವ ಸಾಮಥರ್ಯ್‌ ಮತ್ತು ನಶಿಸಿಹೋಗುವ ಹಂತದಲ್ಲಿರುವ ಚಿಕ್ಕ ಉಗುರುಗಳು-ಮುಂತಾದುವು ಇವುಗಳ ಮುಖ್ಯ ಲಕ್ಷಣಗಳು. ಪೆಸಿಫಿಕ್ ಸಾಗರದ ಉತ್ತರ ತೀರಪ್ರದೇಶದಲ್ಲಿ ಮೊಟ್ಟಮೊದಲ ಬಾರಿ ಯೂಮೆಟೊಪಿಯಸ್ ಜುಬೇಟ ಎಂಬ ಹೆಸರಿನ ಕಡಲ ಸಿಂಹವನ್ನು ನೋಡಿದ ಜರ್ಮನ್ ವಿಜ್ಞಾನಿ ಸ್ಟೆಲ್ಲರ್ ಎಂಬಾತ ಇದರ ದಪ್ಪ ಕುತ್ತಿಗೆಯ ಮೇಲಿನ ಕೇಸರ ಅಥವಾ ಆಯಾಲು ಮತ್ತು ಸಿಂಹದ ಕಣ್ಣಿನಂಥ ಕಣ್ಣುಗಳನ್ನು ನೋಡಿ ಇದನ್ನು ಕಡಲ ಸಿಂಹವೆಂದು ಕರೆದ. ಉಳಿದ ಕಡಲ ಸಿಂಹಗಳಲ್ಲಿ ಉತ್ತರ ಅಮೆರಿಕ ಮತ್ತು ಜಪಾನ್ ಸಮುದ್ರದ ದಕ್ಷಿಣ ಭಾಗದಲ್ಲಿರುವ ಜಲೋಪಸ್ ಎಂಬ ಜಾತಿಯದೂ ಆಸ್ಟ್ರೇಲಿಯ ವಾಸಿಯಾದ ನಿಯೋಫೋಕ ಜಾತಿಯದೂ ದಕ್ಷಿಣ ಅಮೆರಿಕದ ತೀರ ಪ್ರದೇಶಗಳಲ್ಲಿ ಹೇರಳವಾಗಿ ಕಾಣಬರುವ ಓಟರಿಯ ಎಂಬುದೂ ಮುಖ್ಯವಾದುವು. ಇವೆಲ್ಲವೂ ಕಡಲ ಕರಡಿಯ (ಫರ್ ಸೀಲ್) ಹತ್ತಿರ ಸಂಬಂಧಿಗಳು.[][]

ಕಡಲ ಸಿಂಹ

[ಬದಲಾಯಿಸಿ]

ಸಾಮಾನ್ಯವಾಗಿ 1.5 ಮೀ-3.1 ಮೀ ಉದ್ದದ ದೇಹವುಳ್ಳ ಇವು 100 ರಿಂದ 200 ಪೌಂ. ತೂಗುತ್ತವೆ. ಗಂಡು ಹೆಣ್ಣಿಗಿಂತ ಬಹಳ ದೊಡ್ಡದು. ಇವುಗಳಲ್ಲಿ ಚಿಕ್ಕದಾದರೂ ಸ್ಪಷ್ಟವಾದ ಬಾಲವಿದೆ. ಮೈಮೇಲೆ ನವುರಾದ ಕೂದಲಿನ ಹೊದಿಕೆಯಿದೆ. ಇವುಗಳ ಬಣ್ಣ ಕಂದು. ಸಾಧಾರಣವಾಗಿ ದೊಡ್ಡ ದೊಡ್ಡ ಮಂದೆಗಳಲ್ಲಿ ವಾಸಿಸುತ್ತವೆ. ಸಮುದ್ರದಲ್ಲಿ ಸುಲಭವಾಗಿ ದೊರಕುವ ಶಿರಪಾದಿಗಳು ಮತ್ತು ಕಠಿಣಚರ್ಮಿಗಳು ಇವುಗಳು ಆಹಾರ. ಕೆಲವು ಸಾರಿ ಪೆಂಗ್ವಿನ್ ಹಕ್ಕಿಗಳನ್ನು ತಿನ್ನುವುದೂ ಉಂಟು.[]

ಸಂತಾನೋತ್ಪತ್ತಿ ಕಾಲದಲ್ಲಿ ಇವು ನೀರಿನಿಂದ ಹೊರಬಂದು ದಡಗಳಲ್ಲಿ ಕಾಲ ಕಳೆಯತೊಡಗುತ್ತವೆ. ಮೊದಲು ದಡವನ್ನೇರುವ ಗಂಡು ಒಂದು ನಿರ್ದಿಷ್ಟ ಪ್ರದೇಶದ ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸಿಕೊಂಡು ಹಿಂಬಾಲಿಸಿ ಬರುವ ಹಲವಾರು ಹೆಣ್ಣುಗಳನ್ನು ತನ್ನ ಅಧೀನದಲ್ಲಿ ಇಟ್ಟುಕೊಳ್ಳುತ್ತದೆ. ಒಂದೊಂದು ಗಂಡಿನ ಬಳಿ 10-15 ಹೆಣ್ಣುಗಳಿರುವುದು ಸಾಮಾನ್ಯ. ಹೆಣ್ಣುಗಳು ದಡಕ್ಕೆ ಬಂದ ಸ್ವಲ್ಪ ದಿನಗಳಲ್ಲಿಯೇ ಒಂದೊಂದೇ ಮರಿಯನ್ನು ಈಯುತ್ತವೆ. ಮರಿ ಹಾಕಿದ ಕೆಲವು ಕಾಲಾನಂತರ ಗಂಡಿನೊಂದಿಗೆ ಕೂಡಿಕೊಂಡು ಮತ್ತೆ ಗರ್ಭ ಧರಿಸುವುದು ಇವುಗಳು ವೈಚಿತ್ರ್ಯ. ಮರಿಗಳ ರಕ್ಷಣೆಯನ್ನು ಸಾಮಾನ್ಯವಾಗಿ ತಾಯಿಯೇ ನೋಡಿಕೊಳ್ಳುತ್ತದೆ. ಮರಿಯ ಬಣ್ಣ ಅಚ್ಚನೀಲಿ. ನೆಲದ ಮೇಲೆ ತೆವಳಬಲ್ಲುದಾದರೂ ಈಜಲಾರದು. ಹುಟ್ಟಿದ ಎರಡು ವಾರಗಳಲ್ಲಿ ತಾಯಿಯಿಂದ ಈಜುವುದನ್ನು ಕಲಿತು ಸ್ವತಂತ್ರ ಜೀವನ ನಡೆಸಲಾರಂಭಿಸುತ್ತದೆ. ಮರಿ ದೊಡ್ಡದಾದ ಮೇಲೆ ಕಡಲ ಸಿಂಹಗಳೆಲ್ಲ ದಕ್ಷಿಣಾಭಿಮುಖವಾಗಿ ವಲಸೆ ಹೋಗುತ್ತವೆ. ಕಡಲ ಸಿಂಹಗಳನ್ನು ಅವುಗಳ ಚರ್ಮಕ್ಕಾಗಿ ಚರ್ಮದ ತಳದಲ್ಲಿ ಸಂಗ್ರಹವಾಗಿರುವ ಬ್ಲಬರ್ ಎಂಬ ಕೊಬ್ಬಿಗಾಗಿ ಜನ ಬೇಟೆಯಾಡುತ್ತಿದ್ದರು. ಹೀಗಾಗಿ ಅವುಗಳ ವಂಶ ನಶಿಸಿಹೋಗುವ ಸಂಭವವೂ ಇತ್ತು. ಈಗೀಗ ಕಾನೂನಿನ ರಕ್ಷಣೆ ದೊರೆತು ಅದು ತಪ್ಪಿದೆ. ಕೆಲವು ಬಗೆಯ ಕಡಲ ಸಿಂಹಗಳನ್ನು ಪಳಗಿಸಿ ಪ್ರಾಣಿಸಂಗ್ರಹಾಲಯಗಳಲ್ಲಿ ಸರ್ಕಸ್ಸುಗಳಲ್ಲಿ ಇಡುವುದುಂಟು. ತಮ್ಮ ಚುರುಕುಬುದ್ದಿ, ಕ್ರೀಡೆಗಳಲ್ಲಿ ಅಭಿರುಚಿಯಿಂದಾಗಿ ಇವು ಬಹು ಜನಪ್ರಿಯವಾಗಿವೆ. ತುತೂರಿಗಳನ್ನು ಊದುವುದರಿಂದ ಸಂಗೀತಕ್ಕೆ ಅನುಗುಣವಾಗಿ ಕುಣಿಯುವುದೂ ಎಸೆದ ಚೆಂಡನ್ನು ಮೂಗಿನ ತುದಿಯಲ್ಲಿ ಹಿಡಿದು ನಿಲ್ಲಿಸುವುದೂ ಇವಕ್ಕೆ ಪ್ರಿಯವೆನಿಸಿರುವ ಆಟಗಳು.[][]

ಉಲ್ಲೇಖಗಳು

[ಬದಲಾಯಿಸಿ]
  1. https://books.google.co.in/books?id=JgAMbNSt8ikC&pg=PA532&redir_esc=y#v=onepage&q&f=false
  2. https://books.google.co.in/books?id=jFspFxseyC8C&printsec=frontcover&q=&redir_esc=y&hl=en
  3. https://books.google.co.in/books?id=jFspFxseyC8C&printsec=frontcover&q=&redir_esc=y&hl=en
  4. https://books.google.co.in/books?id=JgAMbNSt8ikC&pg=PA532&redir_esc=y#v=onepage&q&f=false
  5. https://books.google.co.in/books?id=jFspFxseyC8C&printsec=frontcover&q=&redir_esc=y&hl=en
pFad - Phonifier reborn

Pfad - The Proxy pFad of © 2024 Garber Painting. All rights reserved.

Note: This service is not intended for secure transactions such as banking, social media, email, or purchasing. Use at your own risk. We assume no liability whatsoever for broken pages.


Alternative Proxies:

Alternative Proxy

pFad Proxy

pFad v3 Proxy

pFad v4 Proxy